ನವಿಲು ಬಾಲದ ಗಿಡ -
ಪಾಲಿಪೋಡಿಯೇಸಿ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಜರಿಗಿಡಗಳಿಗಿರುವ ಸಾಮಾನ್ಯ ಹೆಸರು (ಅಡಿಯಾಂಟಂ). ಮುಖ್ಯವಾದುವು 1. ಲೂನೇಟಮ್, 2. ಕಾಡೇಟಮ್, 3. ಪಿಡೇಟಮ್, 4. ಹಿಸ್‍ಪಿಡ್ಯೂಲಮ್, 5. ವೆನೂಸ್ಟಮ್, 6. ರೆನಿಫಾರ್ಮ, 7. ಫ್ಯಾರಿಸಿ ಮುಂದಾದವು. ಈ ಸಸ್ಯಗಳು ಉಷ್ಣ ವಲಯದಲ್ಲಿ ಹೇರಳ. ಇವು ನೆರಳು ಹಾಗೂ ತೇವ ಹೆಚ್ಚಾಗಿರುವ ಸ್ಥಳಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇವನ್ನು ಉದ್ಯಾನಗಳಲ್ಲಿ ಅಲಂಕಾರಕ್ಕೆಂದು ಬೆಳೆಸುವುದೂ ಉಂಟು. ನವಿಲು ಬಾಲದ ಗಿಡದ ಕಾಂಡ ಭೂಗತವಾಗಿ ಬೆಳೆಯುವ ಪ್ರಕಂದ ಮಾದರಿಯದು. ಇದರ ಮೇಲೆ ಸೂಕ್ಷ್ಮವಾದ ಹುರುಪೆಗಳ ಹೊದಿಕೆ ಉಂಟು. ಕಾಂಡ ಅಲ್ಲಲ್ಲಿ ಕವಲೊಡೆದಿರುತ್ತದೆ. ಕವಲುಗಳ ತುದಿಯಿಂದ ಎಲೆಗಳು ಮೂಡುವವು. ಎಲೆಗಳು ಸರಳ ಇಲ್ಲವೇ ಸಂಯುಕ್ತ ಬಗೆಯವು. ಮಣ್ಣೊಳಗಿನಿಂದ ಮೇಲಕ್ಕೆ ಬೆಳೆಯುವ ಇವು ಸುಮಾರು 60 ಸೆ.ಮೀ. ಉದ್ದ ಇರುವವು. ಇವು ಎಳೆಯವಾಗಿರುವಾಗ ಸುರುಳಿ ಸುತ್ತಿಕೊಂಡಿದ್ದು ಬಿಳಿಯ ಕೂದಲಿನಂಥ ರಚನೆಯಿಂದ ಆವೃತವಾಗಿರುವುವು. ಬೆಳೆಯುತ್ತ ಬಂದಂತೆ ಎಲೆಯ ಅಲಗು ಭಾಗ ಹರಡಿಕೊಳ್ಳುವುದು. ಅಲ್ಲದೆ ಕೂದಲುಗಳು ಉದುರಿ ಹೋಗಿ ತೊಟ್ಟು ಕಪ್ಪು ಬಣ್ಣಕ್ಕೆ ತಿರುಗುವುದು. ಹೀಗೆ ಅಲಗು ಹರಡಿಕೊಂಡಾಗ ನವಿಲುಗರಿಯಂತೆ ಕಾಣುವುದರಿಂದ ಈ ಗಿಡಕ್ಕೆ ನವಿಲು ಬಾಲದ ಗಿಡ ಎಂಬ ಹೆಸರು ಬಂದಿದೆ. ಎಲೆಯ ಅಲಗು ಸಾಮಾನ್ಯವಾಗಿ ಅನೇಕ ಹಾಲೆಗಳಾಗಿ ವಿಭಾಗಗೊಂಡಿವೆ. ಹಾಲೆಗಳ ಅಂಚಿನ ತಳಭಾಗದಲ್ಲಿ ಸಸ್ಯದ ಪ್ರಜನನಾಂಗಗಳಾದ ಬೀಜಕೋಶಗಳು (ಸ್ಪೊರ್ಯಾಂಜಿಯ) ಉಂಟು. ಇವು ವಿವಿಧ ವಯಸ್ಸಿನ ಬೀಜಕೋಶಗಳನ್ನು ಒಳಗೊಂಡ ಗುಂಪುಗಳಂತೆ ಇರುವವು. ಈ ಗುಂಪುಗಳಿಗೆ ಸೋರೆ ಎಂದು ಹೆಸರು. ಪ್ರತಿ ಬೀಜಕೋಶವೂ 64 ಬೀಜಕಗಳನ್ನು ಉತ್ಪಾದಿಸುತ್ತದೆ. ಇವು ಕಾಲಾನುಕಾಲಕ್ಕೆ ಗಿಡದಿಂದ ಉದುರಿ ಕೆಳಕ್ಕೆ ನೆಲದ ಮೇಲೆ ಬಿದ್ದು ಲಿಂಗಾಣುಜನಕಗಳಾಗಿ (ಗ್ಯಾಮಿಟೋಫೈಟ್) ಬೆಳೆಯುವುವು. ಇವು ಸ್ವತಂತ್ರ ಜೀವನ ನಡೆಸುತ್ತವಾದರೂ ನವಿಲು ಬಾಲದ ಗಿಡದ ಜೀವನ ಚಕ್ರದ ಒಂದು ಘಟ್ಟವನ್ನು (ಲೈಂಗಿಕ ಘಟ್ಟ) ಪ್ರತಿನಿಧಿಸುವ ಸಸ್ಯಗಳು ಮಾತ್ರ. ಇವುಗಳಲ್ಲಿ ಗಂಡು ಮತ್ತು ಹೆಣ್ಣು ಸಂತಾನಾಂಗಗಳು ಸ್ಥಿತವಾಗಿವೆ. ಈ ಅಂಗಗಳು ಉತ್ಪಾದಿಸುವ ಲಿಂಗಾಣುಗಳು ನಿಷೇಚನೆಯಲ್ಲಿ ಪರಸ್ಪರ ಕೂಡಿಕೊಂಡ ತರುವಾಯ ಯುಗ್ಮಜ ರೂಪುಗೊಂಡು ಅದು ಮುಂದೆ ಹೊಸ ನವಿಲು ಬಾಲದ ಗಿಡವಾಗಿ ಪರಿಣಮಿಸುವುದು.
		(ಟಿ.ಸಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ